Monday, September 25, 2017

ಅಪೂರ್ಣ

ಕೆಂಪಾಗಿವೆ ಕಣ್ಣು ಕತ್ತಲೆಯ ಕಾಟಕೆ
ಬಿಡುವ ನಿಡಿದಾದ ಉಸಿರಿಗೆ ಬಾಡಿದೆ ಬಾಡಿ
ಪಂಖವಿಲ್ಲದ ಹಕ್ಕಿ ಹಾರಲಾಗದೇ, ಸೋತು
ಹೋಗುವ ಮುನ್ನ ನನ್ನೆದೆಯ ಧಗೆಗೆ, ಸೋನೆಯಾಗು!

ಇಷ್ಟು ಹತ್ತಿರವಿದ್ದೂ, ದೂರವಿರಬೇಕಾದ ಪಾಡು
ಇಷ್ಟುದ್ದ ಬಿಟ್ಟಿರುವ ದಾಡಿಯನ್ನಾದರೂ ನೋಡು,
ಊಟ-ನಿದ್ದೆಗಳ ಕಾಲ್ಕಿತ್ತ ಓಟ, ಹೊಟ್ಟೆಯಲಿ ಕಾರ ಕಲೆಸಿದ ಆಟ
ದಯೆ ಬಾರದೇ ಇನ್ನೂ, ವರವ ಕೊಡು ಎನಗೆ ನೀನು!

ಬಾ ಇಲ್ಲಿ ಸಂಧಿಸು, ಇಂದೆನ್ನ ಬೆಂಗಳೂರಿನಲಿ
ನಿತ್ಯವೂ ಓಡಾಡೋ ವಿಜಯಾವತಾರ
ಪಾರ್ಕಿನಲಿ, ಥಿಯೇಟರಿನಲಿ, ಮಾಲ್ ನಲಿ, ಹೆಚ್ಚೆಸ್ಸಾರ್ ನಲಿ   
ಸೋತು ಹೋಗುವ ಮುನ್ನ ಎದೆ-ಧರೆಗೆ ಮಳೆಯಾಗು !

ನಿಶಾಚರಿಯು ನಾನು, ಚಂದಿರನ ದೂರಿದೆ,
ಹಸಿದ ಬಡವನ ಕೈಗೆಟುಕದ ರೊಟ್ಟಿ ತುಣುಕು ನೀನು
ಅಳುವ ಕಂದಮ್ಮಗೆ ಹೆಚ್ಚು ಹಾಲೆಂದರು ಹಿರಿಯರು
ಮೊರೆ ಕೇಳದೇ ಇನ್ನೂ, ಅರ್ಧನಾರೀಶ್ವರ ನಾನು!

                                                   
                                                 -ಶಶಿ 

Thursday, August 14, 2014

ಕವಿತೆ

ಕವಿತೆ, ಕವಿತೆ, ನೀನೇಕೆ ಪದಗಳಲಿ ಅವಿತೆ?

ಹಗಲಿರುಳು ಕಷ್ಟದಿ ದಣಿವರಿಯದೇ ದುಡಿದರೂ
ಬಿಡಿಗಾಸು ಸಿಗಲಿಲ್ಲ ಈ ಅಕ್ಷಯ-ಅರೆ ಹೊಟ್ಟೆಗೆ
ನೀನೆಲ್ಲಿಂದ ಬದುಕುಳಿದೆ ಕವಿತೆ?

ಕನ್ನಡಿಯ ಮುಂದೆ ಬಲ-ಕಿರುಬೆರಳಂಚಿಂದ
ಕಣ್ಣ-ಕುಡಿಯ ಕಾಡಿಗೆಯ ತೀಡುವ,
ಹೆಣ್ಣ ಕೆಂಪು, ಕಂಪು ಸೂಸುವ ತುಟಿಯ
ಮೇಲಿರುವ ಕಪ್ಪು ಮಚ್ಚೆಯಲಡಗಿರುವೆಯ ಕವಿತೆ?

ಬರ-ನೆರೆಯ ಹಾವಳಿಗಳಿಂದ,
ನಗರದ, ಏಕತಾನತೆಯ ಯಂತ್ರಗಳ ನಡುವಿಂದ,
ನಿನ್ನ ಕಾಪಾಡಿದವರಾರು ಅನವರತ ಕವಿತೆ?

ಕಷ್ಟಗಳು ಸಾಲಾಗಿ ಸೈನಿಕರಂತೆ ಬಂದಿರಲು
ನಗುಮೊಗದಿ ಸ್ವಾಗತಿಸುವೆ ನೀನಿರಲು
ನನ್ನೊಡಲಲಿ ಕವಿತೆ.

ಮುಖವಾಡದೀ ಬದುಕಿನಲಿ
ನನ್ನ ನಿಜ ಮುಖವೇ ಸಿಗದಿರುವಾಗ
ನನ್ನನ್ನೆಚ್ಚರಿಸಿದ ಆತ್ಮ-ಪ್ರಜ್ಞೆ ನೀನೇನಾ ಕವಿತೆ?

ಎತ್ತ ನೋಡಿದಡತ್ತ ಕಪ್ಪು ಕತ್ತಲೆಯು
ಕತ್ತಲೆಗೆಷ್ಟು ಮುಖ? ಒಂದೇ? ಎರಡೇ?
ಕತ್ತಲೆಯಲೇ ಅಲ್ಲವೆ ಚಂದಿರನ ತೋರಿದ್ದು
ಅಳುವ ಕಂದನ ಹೊಟ್ಟೆಗೆ ಹಾಲನ್ನ-ತುಪ್ಪವಾದದ್ದು
ಶ್ರೀರಾಮನ ತೂಗು-ತೊಟ್ಟಿಲಿನಲಿ ದಿಂಬಾಗಿ,
ಲಾಲಿ-ಹಾಡಾಗಿದ್ದು ನೀನಲ್ಲವೇ ಕವಿತೆ?

ಓ! ಕವಿತೆ, ದಟ್ಟ ಕಾರ್ಮೋಡದಂತೆ
ನನ್ನನ್ನೇಕೆ ನೀ ಕವಿದೆ?
ಈ ಬಿಸಿಯುಸಿರು ನಿನಗೂ ತಾಕಿತೇ?
ನಿಂತು ಮಳೆ ಸುರಿಸಿ ಹೋಗು
ಬಹು ದಿನಗಳಿಂದ ಕಾಯ್ದ ಈ ಇಳೆಗೆ

ಬಡ-ದರಿದ್ರನ “ಅಮ್ಮಾ” ಎನ್ನುವ ಆರ್ತ ಕೂಗಿನಲಿ,
ಹೆಂಗಳೆಯರ ಹಾರು-ಹುಬ್ಬಿನ ಕೆಳಗಿನ ನೋಟದ ಗುರುತ್ವಾಕರ್ಷಣದಲಿ
ಯುವಕನ ಚಿಗುರು ಮೀಸೆಯಂಚಿನ ನಸು ನಗುವಿನಲಿ
ಸತ್ತಾತ್ಮಕೆ ಮಂಗಲ ಹಾಡುವುದೂ ನೀನೇ ಅಲ್ಲವೆ ಕವಿತೆ?

ಗುಡಿ-ಗೋಪುರದೊಳಗಿನ ಗಂಟೆ, ಮಂಗಳಾರತಿಯ ಶಬ್ದದಲಿ
ವೇದ-ಘೋಷಗಳ, ಮಂತ್ರ-ಉಚ್ಛಾರಣೆಗಳಲ್ಲಿ,
ಕವಿತೆ, ಕವಿತೆ, ನೀನೇಕೆ ಶಬ್ದಗಳಲಿ ಕುಳಿತೆ?

ಶಬ್ದ-ಅರ್ಥಗಳಂತೆ ಬಿಡಿಸಲಾಗದ ನಂಟು
ಶಿವ-ಪಾರ್ವತಿಯರಿಗೂ ಉಂಟು
ನೀನಾದೆ ಕವಿ-ಸಹೃದಯರಿಗೆ ಸೇತುವೆ ಕವಿತೆ.

ಎತ್ತ ಹೋದರೂ ನನ್ನ, ಬಿಡದೆ
ಮಾಯೆಯಂತೆ ಕಾಡುವ ನಿನಗೆ, ನಿನ್ನ
ಆದಿ-ಅಂತ್ಯವಿಲ್ಲದ, ನಿರಂತರ, ಬತ್ತದ
ಅಗೋಚರ ಸೆಲೆಗೆ ನನ್ನ ನಮೋ ನಮಃ
ಕವಿತೆ, ಕವಿತೆ, ನೀನೇಕೆ ನನ್ನಲ್ಲಿ ಬೆರೆತೆ?

-ಶಶಿಧರ. ಕ. ಹಿರೇಮಠ, ಕರಮುಡಿ
ಕನಸು ಮಾರುವವ

ಕನಸು ಬೇಕೆ? ಕನಸು?
ಹಕ್ಕಿಯಂತೆ ಹಾರುವ ಕನಸು?
ಹೂವಂತೆ ಗಂಧ-ಬಣ್ಣ ಪಡೆವ ಕನಸು?
ಮೀನಿನಂತೆ ಈಜುವ ಕನಸು?
ಕನಸು ಬೇಕೆ? ಕನಸು?
ಬೆಲೆ? ನೀವು ನಕ್ಕರೆ ಸಾಕು.

ಎನ್ನುತ್ತ ನಾನು ಅಲೆಯುತ್ತಿದ್ದೆ ಊರು
ಹರೆಯದ ಚಲುವ, ಪಟಗ ಸುತ್ತಿ
ಧೋತ್ರ ಉಟ್ಟು, ಕೊಲ್ಲಾಪುರ ಚಪ್ಪಲು,
ಚೂಪಾದ ಮೀಸೆ, ಅಷ್ಟೇ ಹರಿತ ಕಣ್ಣ ನೋಟ
ದೇಸೀ ಜುಬ್ಬಾ, ತಲೆಯ ಮೇಲೊಂದು ಪುಟ್ಟಿ
ಕನಸು ಬೇಕೆ? ಕನಸು?

ಚಿಟ್ಟೆ ಕನಸು ಪಡೆದವ
ಚಿಟ್ಟೆಯಾಗಿ ಹಾರಿ ಹೋದ
ಹಕ್ಕಿ ಕನಸ ಪಡೆದವಳು
ಗಿಣಿಯಾಗಿ ಹಾರಿಹೋದಳು
ಏನೂ ಬೇಕಿಲ್ಲ ನಿಮ್ಮಿಂದ
ಮುಗುಳ್ನಗೆಯೊಂದಷ್ಟೇ ಸಾಕು

ಧಿಗ್ಗನೆದ್ದ ನಾನು ಕಣ್ಣರಳಿಸಿ ನೋಡಿದರೆ
ಕಿಟಕಿಯಲೊಂದು ಗಿಣಿ ನನ್ನ ನೋಡುತ್ತಿತ್ತು
ಗೋಡೆ ಮೇಲೊಂದು ಚಿಟ್ಟೆ ರೆಕ್ಕೆ ಬಡಿಯುತ್ತಿತ್ತು
'ಕಾಟ್' ಮೇಲಿದ್ದ ನನಗೆ ಕಾಲಲಿ ಚಪ್ಪಲಿ
ತಲೆಗೆ ಪಟಗ, ಬದಿಯಲಿ ಪುಟ್ಟಿ
ಷರ್ಟ್ ನೇತಾಡುವ ಹ್ಯಾಂಗರಿಗೆ ಜುಬ್ಬಾ
ಬರ್ಮುಡಾ ಬದಲು ಧೋತ್ರ

ಕನಸು ಬೇಕೆ? ಕನಸು?
ವಾಸ್ತವವೇ ಕನಸಾಗುವ ಕನಸು!
ಕನಸೇ ನಿಜವಾಗುವ ಕನಸು!

ಬದಲಾವಣೆ

ಬದಲಾವಣೆ

ಇಲ್ಲಿ, ನಮ್ಮೂರಿನಲ್ಲಿ ಹರಿಯುತಿರುವಳು ತುಂಗೆ
ಕೆಲ ಕಡೆ ಶಾಂತ ಗಂಗೆ, ಮತ್ತೆ ಹಲವೆಡೆ ರುದ್ರ-ಭಯಂಕರಿ
ನಿಲ್ಲಿಸಿ ಅವಳ, ಮುಳಗಿಸಿ ಹಲ ಹಳ್ಳಿಗಳ
ಕಟ್ಟಿರುವೆವು ಆಣೆಕಟ್ಟೆಯ ನಮ್ಮ ಸ್ವಾರ್ಥಕಾಗಿ

ಅಲ್ಲಿ, ಸಹ್ಯಾದ್ರಿಯ ತಪ್ಪಲಿನಲಿ, ನೆಲೆ ನಿಂತ ಅಚಲ ಬೆಟ್ಟ
ಕೆಲ ಕಡೆ ಏರಿ, ಕೆಲ ಕಡೆ ಇಳಿದು ಮಾಡಿವೆ ಕಣಿವೆ-ಕಂದರ
ಬಗೆದದರ ಹೊಟ್ಟೆ, ಸವೆಸಿ ನಮ್ಮವರ ರಟ್ಟೆ
ಪ್ರಾಣಿ-ಪಕ್ಷಿ ಸಾಯಿಸಿ, ಮಣ್ಣು ಮುಕ್ಕುತ್ತಿದ್ದೇವೆ ಭರದಿ

ಕಲುಷಿತಗಳ ನೀರಿಗೆ ಸೇರಿಸಿ, ಮೀನುಗಳ ಸಾಯಿಸಿ
ನೋಟುಗಳ ಸಂತಸದಿ ಎಣಿಸಿ, ಮರೆತಿರುವೆವು ಗವರ್ನೆನ್ಸ್-ಸಸ್ಟೆನೆಬಿಲಿಟಿ
ಕೊಂಡು ಕಾರು, ನಿರ್ಮಿಸಿ ಫ್ಯಾಕ್ಟರಿ, ಸೇರಿಸಿ ಗಾಳಿಗೆ ವಿಷಾನಿಲ
ಮಲಗಿದರೆ ಉಂಡು ಪಾಯಸ, ತಟ್ಟಿದ್ದೇವೆ ನರಕದ ಬಾಗಿಲ

ಹೀಗೆಯೇ ಯೋಚಿಸುತ್ತ ಮಲಗಿದ್ದ ನಾನು ಮಗ್ಗಲು ಬದಲಿಸಿದೆ
ಸೊಳ್ಳೆಯೊಂದು ರಕ್ತ ಹೀರಿ ಅಪ್ಪಚ್ಚಿಯಾಗಿತ್ತು
ಬೆಳಿಗ್ಗೆ ಪೇಪರಿನಲ್ಲಿ ಡ್ಯಾಮ್ ಒಡೆದು ಹಲ-ಹಳ್ಳಿ ಸತ್ಯಾನಾಶ
ಮಣ್ಣು ಕುಸಿದು ಫ್ಯಾಕ್ಟರಿ ಧ್ವಂಸ, ಪ್ರಕೃತಿ ತಾನೂ ಮಗ್ಗಲು ಬದಲಿಸಿತ್ತು.

ಶಶಿ 

Friday, October 5, 2012

ಹೈದರಾಬಾದ್ ಗೆ  ಬಂದ ನಂತರ  ಕನ್ನಡ ಕೇಳುವುದೇ  ದುಸ್ತರವಾಗಿಬಿಟ್ಟಿದೆ . ಈಗ  ನೆನಪಾಗುತ್ತಿವೆ ಕನ್ನಡ ಹಾಡುಗಳು . ಕರ್ನಾಟಕಕ್ಕೆ ಜಯವಾಗಲಿ. ಸ್ವಲ್ಪ  ದಿನಗಳಲಿ ಧಾರವಾಡಕ್ಕೆ ಬರುವೆ, ಹೊಸದೊಂದು ಕವನದ ಜೊತೆ. ಧನ್ಯವಾದ.

Saturday, September 3, 2011

ಒಗ್ಗಟ್ಟು-ಮೋಕ್ಷ

ಮನದ ಮೂಲೆಯಲ್ಲೆಲ್ಲೋ ಅಡಗಿದೆ
ಹತ್ತಿಕ್ಕಿದ ಭಾವ

ಕಾಯುತ್ತ ಕಳೆಯುತ್ತ ಕಾಲಗಳು ಉರುಳುತ್ತ

ಸಾಸಿವೆ ಬೀಜವಾಗಿದೆ ದೈತ್ಯಾಲವೃಕ್ಷ

ಏನೂ ಬೇಡ ಎಂತೂ ಬೇಡ, ಜೋತೆಗೊಂದಿದ್ದರೆ

ಜನ್ಮ ಧನ್ಯ, ಸಾರ್ಥ


ಏನಿದೇನಿದೆಂದು ಕೇಳೀರಿ ಜೋಕೆ ಸಿಗುವುದುತ್ತರವೊಂದೆ

ಕೆಲಸ-ಕಾರ್ಯಗಳೇ ಜೀವನವಲ್ಲ

ಅಪಾರಜಲರಾಶಿ ಶರಧಿಯ ಸೇರುವ ಹಾಗೆ

ಪ್ರೀತಿ, ಸ್ನೇಹ, ದಾಂಪತ್ಯ

ಗುರಿಗಳೇ ಹೀಗೆ ಮುಟ್ಟುವ

ತನಕ ಬ್ರಹ್ಮವಿದ್ಯೆ ನಂತರ ? ಮಂಗನಾಟ!


ಕಷ್ಟಗಳಿಲ್ಲದವರಾರು? ಮಗುವಿಗೆ ಹಸಿವಿನ ಕಾಟ
ಯುವಕಗೆ
ದುಡಿಮೆ ಹೊರೆ
ವೃದ್ಧನಿಗೆ ಗೆಳೆಯನಿಲ್ಲದ ಬೇಸರ

ಯಶವೆಂಬುದನು
ಹುಡುಕಲ್ಹೋಗಬೇಡಿ ಎಲ್ಲಿಯೋ ಒಂದು
ನಿಲ್ದಾಣದಲಿ, ನೀವ್ ನಡೆವ ದಾರಿಯೇ ಅದು ಎಂಬುದೆಷ್ಟು ಮಂದಿಗೆ ಗೊತ್ತು?

ವರ್ತಮಾನದಲಿ ಬದುಕದವ ಒಂದು ಒಜನಾಗಿದ್ದಾನೆ, ಇಲ್ಲ ಮಗುವಾಗಿದ್ದಾನೆ


ಮೋಕ್ಷ,
ನಿರ್ವಾಣ, ಮುಕ್ತಿ ಎಲ್ಲರಿಗೂ ಸಿಗುತ್ತದೆ

ಸಿಂಹಾವಲೋಕನ ಕ್ರಮದಿಂ ನೋಡಿ ನಿಮ್ಮ ಜೀವನ

ನಿಮಗೆ ತೃಪ್ತಿ ತಂದಿದೆಯೇ ? ಎಷ್ಟರ ಮಟ್ಟಿಗೆ?

ಇಲ್ಲದಿದ್ದರೆ ಭಗವಂತನ ಬಳಿಯಿದ್ದರೂ

ನಿಮಗೆ ತಪ್ಪಿದ್ದಲ್ಲ ಕಷ್ಟ, ನಷ್ಟ, ನಿನಗೆ

ನೀನೋಪ್ಪಿಗೆಯಾದರೆ ಯಾವ ದೇವನ ಚಮಚಾಗಿರಿಯೇಕೆ?
ಆಫೀಸೆಂಬ ಗುಮ್ಮ

ರಸ್ತೆ ಬದಿಯಲೊಬ್ಬ ಅಂಕಲ್
ಹೊಡೆದು ಎಡ ಕೈಕಾಲು ಪಾರ್ಶಿ
ಮೂಗು ನೆಲಕೆ ಜಜ್ಜಿ ರಕ್ತ ಹರಿಯುತಿರಲು
ನಾನೇನೂ ಮಾಡಲಾರೆ
ಯಾಕೆಂದರೆ ನಾ ಆಫೀಸಿಗೆ ಹೋಗುತ್ತಿದ್ದೇನೆ

ಕಮಟು ಸೀರೆ ಜಡ್ಡು ತಲೆಯ
ಧೂಳ ಗುಡ್ಡದಲ್ಲಿ ಬಿದ್ದ
ರೋಗಿ ಭಿಕ್ಷುಕಿಯು ಪಕ್ಕ ಸತ್ತಿದ್ದರೂ
ನಾನೇನೂ ಮಾಡಲಾರೆ
ಯಾಕೆಂದರೆ ನಾ ಆಫೀಸಿಗೆ ಹೋಗುತ್ತಿದ್ದೇನೆ

ಪ್ರೀಯ ತಮ್ಮ ಫೋನು ಮಾಡಿ
'ಅಣ್ಣ ! ನಮ್ಮ ನಾಯಿ ಮರಿಯ ಹಾಕಿ'
ವಾಕ್ಯ ತುಂಡರಿಸಿ ನಾ ಹೇಳುವೆ
ನಾನೇನೂ ಮಾಡಲಾರೆ
ಯಾಕೆಂದರೆ ನಾ ಆಫೀಸಿನಲ್ಲಿದ್ದೇನೆ

ಗ್ರೇಡ್ ಸಪರೇಟರ್ ಕೆಳಗೆ ಫುಟ್- ಪಾತ್ ಮೇಲೆ
ದಿನವು ನಿದ್ರಿಸೋ ಜನರ ಕಂಡು
ವಾಯು, ಶಬ್ದ ಮಾಲಿನ್ಯ ಚಳಿಗೆ ಹೆದರದವರಿಗೆ
ನಾನೇನೂ ಮಾಡಲಾರೆ
ಯಾಕೆಂದರೆ ನಾನು ದಿನವೂ ಆಫೀಸಿಗೆ ಹೋಗುತ್ತೇನೆ

ದೇವರಲ್ಲಿ ಕೆಳುವೆನಿಷ್ಟು
ಅನಾಥರಿಗೆ ರಕ್ಷಣೆ ಕೊಟ್ಟು
ನನ್ನನ್ಹೀಗೆ ಇಟ್ಟ ಅವನೊಬ್ಬ ಅದ್ಭುತ ಮೇಷ್ಟ್ರು
ನಾನೇನೂ ಮಾಡಲಾರೆ

ಯಾಕೆಂದರೆ ಕವನದಿಂದ ಮನದುಂಬಿ ಪ್ರಾರ್ಥಿಸುವೆ.